ಜಿಲ್ಲೆಯ ಸುದ್ದಿಹಾವೇರಿ
ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಾಸಿಸ್ಟಗಳ ಪಾತ್ರ ಮಹತ್ವದ್ದು: ಡಾ. ಸರಿತಾ
· News Haveri
ಹಾವೇರಿ: ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ವೈದ್ಯರು ಹಾಗೂ ಫಾರ್ಮಸಿ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸರಿತಾ ಹೇಳಿದರು.
ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾ ಘಟಕದಿಂದ ಬುಧವಾರ ತಾಲ್ಲೂಕಿನ ದೇವಗಿರಿ ಬಳಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವೈಜ್ಞಾನಿಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೆಲಸದ ಒತ್ತಡದ ನಡುವೆ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರ ಬಹುಳ ದೊಡ್ಡದು. ತಾಳ್ಮೆ ಹಾಗೂ ಜನರ ನಡುವಿನ ಉತ್ತಮ ಸಂವಹನ ವೃತ್ತಿ ಬದುಕು ಸರಾಗವಾಗಿ ಸಾಗಿಸಲು ಸಹಕಾರಿಯಾಗಿದೆ ಎಂದರು.
ರಾಜ್ಯ ಸಂಘದ ಗೌರವಾಧ್ಯಕ್ಷ ಸುರೇಶ ಮೊರಗೇರಿ ಮಾತನಾಡಿ, ಪ್ರಾಮಾಣಿಕ ಪ್ರಯತ್ನದ ಮೂಲಕ ಸಂಘಟನೆಯ ಹೋರಾಟದಿಂದ ಸೂಕ್ತ ಸ್ಥಾನಮಾನ ಪಡೆಯಬಹುದಾಗಿದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವುದು ಅತ್ಯವಶ್ಯ. ಒಗ್ಗಟ್ಟಿನಿಂದ ಇದ್ದರೆ ಏನಾದರೂ ಕೂಡ ಪಡೆಯಬಹುದಾಗಿದೆ. ಆದರೆ ಹೊಂದಾಣಿಕೆಯಲ್ಲಿ ಕೊರತೆ ಇಲ್ಲದಿದ್ದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಪ್ರತಿಯೊಬ್ಬ ಫಾರ್ಮಸಿ ಅಧಿಕಾರಿಗಳು ಅರಿತುಕೊಳ್ಳಬೇಕಿದೆ ಎಂದರು.
ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಏಕತಾ ಮನೋಭಾವ ಇದ್ದಲ್ಲಿ ವೃತ್ತಿ ಬದುಕಿನಲ್ಲಿ ನೆಮ್ಮದಿ ಇರಲಿದೆ. ಜೊತೆಗೆ ವೃತ್ತಿ ಬದುಕಿನಲ್ಲಿ ಉನ್ನತ ಮಟ್ಟಕ್ಕೆ ಏರಲು ಸಹಕಾರಿಯಾಗಲಿದೆ. ಬಡವರ ಸೇವೆ ಮಾಡುವ ಅವಕಾಶವನ್ನು ಸರಕಾರ ನಮಗೆ ಒದಗಿಸಿ ಕೊಟ್ಟಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಮೂಲಕ ನಾವೆಲ್ಲರೂ ಪ್ರಾಮಾಣಿಕವಾಗಿ ಜನಸೇವೆ ಮಾಡೋಣ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಪಟೇಲ ಮಹಮ್ಮದ್ ಅಸಗರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಾಗಾರವನ್ನು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನೀಲೇಶ ಎಂ.ಎನ್ ಉದ್ಘಾಟಿಸಿದರು. ಎಮ್.ಎಮ್.ಜೆ.ಜಿ ಫಾರ್ಮಸಿ ಕಾಲೇಜಿನ ಪ್ರಾಚಾರ್ಯೆ ಡಾ. ಶಾಯಿಸ್ತಾ ಓಮರ್, ರಾಜ್ಯ ಸರಕಾರಿ ಫಾರ್ಮಾಸಿ ಅಧಿಕಾರಿಗಳ ಸಂಘದ ಅಧ್ಯಕ್ಷ ಸಂತೋಷಕುಮಾರ ಕುಸುಮಾ ಮಾತನಾಡಿದರು.
’ವೃತ್ತಿ ಕೌಶಲ ಹಾಗೂ ಒತ್ತಡ ನಿರ್ವಹಣೆ’ ಕುರಿತು ನಿವೃತ್ತ ಫಾರ್ಮಾಸಿ ಅಧಿಕಾರಿ ಶಿವಯೋಗಿ ಬಣಕಾರ ಉಪನ್ಯಾಸ ನೀಡಿದರು. ಸಂಘದ ರಾಜ್ಯ ಪರಿಷತ್ ಸದಸ್ಯ ಶಶಿಧರಸ್ವಾಮಿ ನಿರ್ವಾಣಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಉತ್ತಮ ಫಾರ್ಮಸಿ ಅಧಿಕಾರಿಗಳನ್ನು, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಫಾರ್ಮಸಿ ಅಧಿಕಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜಿಲ್ಲಾ ಕುಟುಂಬ ಕಲ್ಯಾಣಾಕಾರಿ ಡಾ.ರುದ್ರಸ್ವಾಮಿ ಎಂ.ಕೆ., ಜಿಲ್ಲಾ ಕುಷ್ಠರೋಗ ನಿರ್ಮೂಲನಾಣಾಧಿಕಾರಿ ಡಾ. ಚನ್ನಬಸಯ್ಯ ವಿರಕ್ತಮಠ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಮೋದ ಗೊಂದಕರ, ರಾಜ್ಯ ಸಂಘದ ಕಾರ್ಯದರ್ಶಿ ವಿಜಯಕುಮಾರ್ ವ್ಹಿ.ಎನ್., ರಾಜ್ಯ ಸಂಘದ ಖಜಾಂಚಿ ಹಾರೂನ್ ರಷೀದ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ ಘಾಟಗೆ, ಎ.ಆಯ್.ಪಿ.ಎ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೆರೂಡಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಜಯಲಕ್ಷ್ಮಿ ಹಿರೇಮಠ ನಿರ್ವಹಿಸಿದರು.
