ಕನ್ನಡ ಸೇವಕ ವಾಸಪ್ಪ ಕುಸಗೂರಗೆ ರಾಜ್ಯೋತ್ಸವ ಪ್ರಶಸ್ತಿ ಗರಿ
7
ಜಿಲ್ಲೆಯ ಸುದ್ದಿ

ಕನ್ನಡ ಸೇವಕ ವಾಸಪ್ಪ ಕುಸಗೂರಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

24 ದಿನಗಳ ಹಿಂದೆ
ಕನ್ನಡ ಕನ್ನಡ ನಡಿ ನಮ್ಮ ಸಂಗಡ ಎಂಬ ಧ್ಯೇಯವನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದು ಹೇಳದೇ ಕೆಲಸ ಮಾಡಿ ತೋರಿದ ಕನ್ನಡ ಸೇವಕ ವಾಸಪ್ಪ ಕುಸಗೂರ ಅವರಿಗೆ ಇದೀಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಬರೋಬ್ಬರಿ ಐವತ್ತು ವರ್ಷಗಳ ಸಾಧನೆಗೆ ಅಂತೂ ರಾಜ್ಯಮಟ್ಟದಲ್ಲಿ ಗುರುತಿಸಿದ್ದು ಈ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ. *ಪರಿಚಯ * ರಾಣಿಬೆನ್ನೂರ ತಾಲೂಕಿನ ಕುಪ್ಪೇಲೂರ ಗ್ರಾಮದ ವಾಸಪ್ಪ ಕುಸಗೂರ ಜನಿಸಿದ್ದು 1961ರ ಜೂನ್ 1 ರಂದು. ಇದೀಗ 65 ತುಂಬು ಹರೆಯದಲ್ಲೂ ಕನ್ನಡ ಭಾಷೆ, ಸಾಹಿತ್ಯದ ಜತೆಗೆ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಇಂದಿಗೂ ತೊಡಗಿಸಿಕೊಂಡಿದ್ದಾರೆ. 2004 ರಿಂದ 2011 ರವರೆಗೆ ಎರಡು ಅವಧಿಗೆ ನಿರಂತರವಾಗಿ ರಾಣೆಬೆನ್ನೂರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿ ಜನ-ಮನದಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲ ತಾಲೂಕ ಕನ್ನಡ ಸಾಹಿತ್ಯ ಭವನದ ನಿರ್ಮಾತೃ ಮನಸ್ಸು ಮಾಡಿದರೆ ಏನೆಲ್ಲ ಸಾಧ್ಯ ಎಂಬುದಕ್ಕೆ ವಾಸಪ್ಪ ಕುಸಗೂರ ಉದಾಹರಣೆ. ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣದ ಕಲ್ಪನೆಯೇ ಇರದ ದಿನಗಳಲ್ಲೇ ದಾನಿಗಳ ಸಹಕಾರದೊಂದಿಗೆ ರಾಜ್ಯದಲ್ಲೇ ಮೊದಲ ಬಾರಿಗೆ ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸುವ ಮೂಲಕ ರಾಜ್ಯಕ್ಕೆ ನಿದರ್ಶನರಾಗಿದ್ದಾರೆ ಮಾತ್ರವಲ್ಲ ಇತರರಿಗೂ ಮಾದರಿಯಾಗಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮೂಲಕ ಗ್ರಾಮೀಣ ಭಾಗಗಳಲ್ಲಿ ಕಸಾಪ ಘಟಕಗಳ ಸ್ಥಾಪನೆ, ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸುವ ಮೂಲಕ ಸಾಹಿತ್ಯ ಪರಿಷತ್ತಿನ ಕಾರ್ಯಗಳನ್ನು ತಳಮಟ್ಟದವರೆಗೂ ಕೊಂಡೊಯ್ದು ವಿಸ್ತರಣೆ ಮಾಡಿದ್ದಾರೆ. ಸಾಹಿತ್ಯದ ಜತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ವಾಸಪ್ಪ ಕುಸಗೂರ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಸಂಚಲನ ಸೃಷ್ಠಿಸಿದ್ದು ಹೊಸ ತಲೆಮಾರಿನ ಯುವಕರಿಗೆ ಅಗ್ರಪಂಕ್ತಿ ಹಾಕಿಕೊಟ್ಟಂತಾಗಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಗೌರವ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಕದರಮಂಡಲಗಿ ಶ್ರೀ ಕಾಂತೇಶ ದೇವಸ್ಥಾನದ ಪಂಚ ಕಮಿಟಿ ಸದಸ್ಯರಾಗಿ 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಂಘದ ಅಮೂಲ್ಯ ಪ್ರಶಸ್ತಿ, ಕನ್ನಡ ರತ್ನ ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ ಹಾಗೂ ಚಾಲುಕ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಸಂತಸ ಮೂಡಿಸಿದೆ. ಯಾವುದೇ ಪ್ರಶಸ್ತಿಯ ನಿರೀಕ್ಷೆಯಿಲ್ಲದೆ ನನ್ನ ಪಾಡಿಗೆ ನಾನು ಕನ್ನಡ ಭಾಷೆ, ಸಾಹಿತ್ಯ, ನಾಡು-ನುಡಿಯ ಸೇವೆಯನ್ನು ಮಾಡುತ್ತಿದ್ದೇನೆ. ಈಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಇದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದೆಯೂ ನನ್ನಿಂದಾದ ಸೇವೆ ಸಲ್ಲಿಸುತ್ತೇನೆ ಎನ್ನುತ್ತಾರೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ವಾಸಪ್ಪ ಕುಸಗೂರ