ಜಿಲ್ಲೆಯ ಸುದ್ದಿಕೃಷಿ
ಕಬ್ಬಿಗೆ ದರ ನೀಡುವವರೆಗೆ ಡಿಸಿ ಕಚೇರಿ ಬಿಟ್ಟು ಹೋಗಲ್ಲ : ರೈತರ ಪಟ್ಟು
16 ಗಂಟೆಗಳ ಹಿಂದೆ
ಕಬ್ಬಿನ ಬೆಲೆ ನಿಗದಿ ಕುರಿತಂತೆ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ದರ ಸಂಘರ್ಷ ತಾರಕಕ್ಕೇರಿದ್ದು, ಸೋಮವಾರ ಬೃಹತ್ ಪ್ರತಿಭಟನೆ ರೂಪ ಪಡೆದುಕೊಂಡಿತಲ್ಲದೇ, ರೈತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಆಕ್ರೋಶ ಹೊರಹಾಕಿದ್ದು ಮಾತ್ರವಲ್ಲ ಇಡೀ ಜಿಲ್ಲಾಡಳಿತ ಭವನಕ್ಕೆ ದಿಗ್ಬಂಧನ ಹಾಕಿ ದರ ನಿಗಧಿಗೆ ಪಟ್ಟು ಹಿಡಿದು ಕುಳಿತರು. ತಡರಾತ್ರಿ 10.30ರವರೆಗೂ ಚರ್ಚೆ ಮುಂದುವರೆಯಿತು. ಈ ವೇಳೆ ರೈತರು ಜಿಲ್ಲಾಧಿಕಾರಿಗಳ ಕೊಠಡಿಯ ಹೊರಗೆ ನೆಲದ ಮೇಲೆ ಮಲಗಿ ವಿರಮಿಸುವ ಜತೆಗೆ ದರ ನಿಗದಿಯವರೆಗೆ ಜಾಗ ಬಿಟ್ಟು ಕದಲಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದಂತಿತ್ತು.
ದರ ನಿಗದಿ ಕುರಿತಂತೆ ಈಗಾಗಲೇ ಎರಡು ಹಂತದಲ್ಲಿ ಸಭೆ ನಡೆದಿತ್ತಾದರೂ ಫಲ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ರೈತರು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಮನೆಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದ್ದರು. ಇದರಿಂದ ತಪ್ಪಿಸಿಕೊಳ್ಳಲು ಮುಂದಾದ ಸಚಿವರು ಮತ್ತು ಜಿಲ್ಲಾಡಳಿತ ನಿರ್ಬಂಧದ ಅಸ್ತ್ರ ಪ್ರಯೋಗಿಸಿ ಸಚಿವರ ಮನೆ ಸುತ್ತ ಧರಣಿಗೆ ಅವಕಾಶ ಇಲ್ಲದಂತೆ ಬಂದೋಬಸ್ತ್ ಮಾಡಿದರು.
ಆದರೆ ಹೋರಾಟದ ಮಜಲು ಬದಲಿಸಿದ ಅನ್ನದಾತರು ಬಂಕಾಪುರ ಟೋಲ್ ನಾಕಾಗೆ ಮುತ್ತಿಗೆ ಹಾಕಿ ಜಿಲ್ಲಾಡಳಿತ, ಸಕ್ಕರೆ ಸಚಿವ ಹಾಗೂ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿ ರಾಷ್ಟ್ರೀಯ ಹೆದ್ದಾರಿ ತಡೆದು ತಮ್ಮ ಆಕ್ರೋಶ ಹೊರಹಾಕಿದ್ದಲ್ಲದೇ ಸುಮಾರು ಎರಡು ಗಂಟೆ ಕಾಲ ಸಂಚಾರ ನಿರ್ಬಂಧಿಸಿದ್ದರು. ಕಬ್ಬಿನ ದರ ನಿಗದಿ ಕುರಿತ ಸಭೆಗೆ ಪಟ್ಟು ಹಿಡಿದರಲ್ಲದೇ, ಆ ಸಭೆಗೆ ಕಾರ್ಖಾನೆ ಮಾಲೀಕರೇ ಬರಬೇಕೆಂಬ ಷರತ್ತು ಹಾಕುವ ಜತೆಗೆ ರೂ.3600ನ್ನೇ ನೀಡಬೇಕೆಂಬ ಖಚಿತತೆ ನೀಡಿದ್ದರು. ಕೊನೆಗೆ ರೈತರ ಬೇಡಿಕೆಗೆ ಮಣಿದು ಸೋಮವಾರ ನವೆಂಬರ್ 23 ಕ್ಕೆ ಸಭೆಯ ದಿನಾಂಕ ನಿಗಧಿ ಬೆನ್ನಲ್ಲೇ ಮುತ್ತಿಗೆ ವಾಪಸ್ ಪಡೆದಿದ್ದರು.
ಅದರಂತೆ ಸೋಮವಾರ ಮೂರನೇ ಸಭೆ ನಿಶ್ಚಯವಾಗಿದ್ದು, ಸಕ್ಕರೆ ಸಚಿವರು ಭಾನುವಾರವೇ ಸಭೆಗೆ ತಾವಿರುವುದಿಲ್ಲ ಎಂದು ಮಾದ್ಯಮಗಳ ಮೂಲಕ ಹೇಳಿಕೆ ನೀಡಿದ್ದರಾದರೂ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಸಭೆಗೆ ಹಾಜರಾದರು. ಆದಾಗ್ಯೂ ಕಾರ್ಖಾನೆಗಳ ಮಾಲೀಕರು ಮತ್ತು ರೈತರ ನಡುವಿನ ದರ ನಿಗದಿಯ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಸಿಗಲಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರು 3100ರಿಂದ 3150ಕ್ಕೆ ಅಚಲವಾಗಿ ನಿಂತಿದ್ದು, ಹೆಚ್ಚಿಸಿದಲ್ಲಿ ನಷ್ಟ ವಾಗುತ್ತದೆ ಎಂಬುದು ಅವರ ವಾದ. ಆದರೆ ರೈತರು ಇತರೆ ಜಿಲ್ಲೆಗಳಂತೆ ರೂ.3600 ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ಹಲವು ಗಂಟೆಗಳ ಕಾಲ ನಡೆದ ಸಂಧಾನ ಸಭೆಯಲ್ಲೂ ಒಮ್ಮತ ಮೂಡದ ಕಾರಣ ರೈತರ ಆಕ್ರೋಶ ಕಟ್ಟೆಯೊಡೆದಿದೆ. ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರದ ಗೇಟ್ ಹಾರಿ ಒಳನುಗ್ಗಿದ ರೈತರು ಪ್ರತಿಭಟನೆ ನಡೆಸಿ, ದರ ಘೋಷಿಸುವವರೆಗೂ ಕಚೇರಿ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ತಡರಾತ್ರಿ ಅಂದರೆ ರಾತ್ರಿ ೧೦.೨೦ರ ನಂತರ ಜಿಲ್ಲಾಧಿಕಾರಿಗಳ ಕೊಠಡಿ ಎದುರು ಒಂದಷ್ಟು ರೈತರು ನೆಲದ ಮೇಲೆಯೇ ಮಲಗಿದರೆ, ಮತ್ತೆ ಕೆಲವರು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ನಲ್ಲಿ ಮಲಗಿ ತಮ್ಮ ಮೌನ ಹೋರಾಟ ಮುಂದುವರೆಸಿದರು.
ಸಭೆಯಲ್ಲಿ ಸಕ್ಕರೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಜಿಎಂ ಶುಗರ್ಸ್ ನ ಬಸವರಾಜ, ವಿಐಎನ್ ಪಿ ನಿರ್ದೇಶಕ ವಿವೇಕ ಹೆಬ್ಬಾರ, ರೈತ ಮುಖಂಡ ಚೂನ್ನಪ್ಪ ಪೂಜಾರಿ, ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.
ನಾ ಜಗತ್ನಾಗ ಬ್ಯಾರೆ ಎಲ್ಲೂ ಇಂಥಾ ಸಕ್ರಿ ಲಾಭಿ ನೋಡಿಲ್ಲರಿ, ಹಾವೇರ್ಯಾಗ ಅಷ್ಟ ಸಕ್ರಿ ಲಾಭಿ ಐತಿ. ಇಲ್ಲೆ ಸಕ್ರಿ ಕಾರ್ಖಾನೆ ಮಾಲೀಕರಿಗೆ ಮಣೆ ಹಾಕಿ ಹಾವೇರಿ ಜಿಲ್ಲದಾನ ರೈತರಿಗೆ ದೊಡ್ಡ ಅನ್ಯಾಯ ಮಾಡಾಕುಂತಾರ. ಇಲ್ಲಿನ ಸಕ್ರಿ ಕಾರ್ಖಾನಿ ಮಾಲೀಕರೂ ಬಾಳಾ ಮಂಡತನಾ ಮಾಡಾಕತ್ತಾರಾ. ಅವ್ರ ಮಾತ್ ಕೇಳೋರಿಂದ ರೈತರಿಗೆ ನ್ಯಾಯ ಸಿಗಲ್ಲ. ಶುಗರ ಮಿನಿಸ್ಟರ್ ರುದ್ರಪ್ಪ ಲಮಾಣಿಯವರಿಗೆ ಕಾರ್ಖಾನೆ ಮಾಲೀಕರ ಮನವೊಲಿಸಿ ರೈತರಿಗೆ ನ್ಯಾಯ ಕೊಡಿಸುವ ಶಕ್ತಿ ಇಲ್ಲ. ಇದ್ ಇತ್ಯರ್ಥ ಆಗಬೇಕಾದ್ರ ಸಿಎಂ ಮಧ್ಯಪ್ರವೇಶಾ ಮಾಡ್ಲಿ. ಮತ್ ಕಬ್ಬಿನ ಬೆಲೆ ಘೋಷಣೆ ಮಾಡೂವರ್ಗೂ ಜಿಲ್ಲಾಧಿಕಾರಿ ಕಚೇರಿಯ ಗೇಟ್ ತೆಗಿಯಾಂಗಿಲ್ಲ. ನಮ್ಮ ಬೇಡಿಕೆ ಈಡೇರೋ ವರ್ಗೂ ಹೋರಾಟ ಮುಂದುವರಿತತಿ ಎಂಬುದು ಚೂನ್ನಪ್ಪ ಪೂಜಾರ ಹೇಳಿಕೆ.
