ಜಿಲ್ಲೆಯ ಸುದ್ದಿರಾಜಕೀಯ
ಜಿಪಂಗೆ 34, ತಾಪಂಗೆ 122 ಸ್ಥಾನ
· Updated · News Haveri
ಹಾವೇರಿ: ಜಿ.ಪಂ ಹಾಗೂ ತಾ.ಪಂ ವರ್ಗವಾರು ಮೀಸಲಾತಿ ಪ್ರಕಟವಾಗಿದೆ. ಜಿಲ್ಲೆಗೆ ಒಟ್ಟು 34 ಜಿಪಂ ಸ್ಥಾನಗಳು ಹಾಗೂ 8 ತಾಪಂ ಕ್ಷೇತ್ರಗಳಲ್ಲಿ 122 ಸ್ಥಾನಗಳು ನಿಗದಿಯಾಗಿದೆ. ಜಿಪಂ–ತಾಪಂ ಸೇರಿ ಒಟ್ಟು 156 ಸ್ಥಾನಗಳ ಪೈಕಿ 80 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಜಿಲ್ಲಾ ಪಂಚಾಯಿತಿ ಮೀಸಲಾತಿಯಂತೆ, ಒಟ್ಟು 34 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ 5, ಪರಿಶಿಷ್ಟ ಪಂಗಡಕ್ಕೆ 3, ಹಿಂದುಳಿದ ವರ್ಗ ‘ಅ’ಗೆ 7, ಹಿಂದುಳಿದ ವರ್ಗ ‘ಬ’ಗೆ 2 ಹಾಗೂ ಸಾಮಾನ್ಯ ವರ್ಗಕ್ಕೆ 17 ಸ್ಥಾನಗಳು ಮೀಸಲಾಗಿವೆ.
ಎಸ್ಸಿಗೆ ಮೀಸಲಾಗಿರುವ 5 ಸ್ಥಾನಗಳಲ್ಲಿ 3 ಸ್ಥಾನ ಮಹಿಳೆಯರಿಗೆ, ಎಸ್ಟಿಯ 3 ಸ್ಥಾನಗಳಲ್ಲಿ 2 ಮಹಿಳೆಯರಿಗೆ, ಹಿಂದುಳಿದ ವರ್ಗ ‘ಅ’ದ 7 ಸ್ಥಾನಗಳಲ್ಲಿ 4 ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗ ‘ಬ’ದ 2 ಸ್ಥಾನಗಳಲ್ಲಿ ಒಂದು ಮಹಿಳೆಗೆ ಮೀಸಲಾಗಿದೆ. ಸಾಮಾನ್ಯ ವರ್ಗದ 17 ಸ್ಥಾನಗಳಲ್ಲಿ 7 ಸ್ಥಾನ ಮಹಿಳೆಯರಿಗೆ ಮೀಸಲಾಗಿವೆ. ಹೀಗಾಗಿ ಜಿಪಂನ 34 ಸ್ಥಾನಗಳಲ್ಲಿ 17 ಸ್ಥಾನಗಳು ಮಹಿಳೆಯರ ಪಾಲಾಗಿವೆ.
ತಾಪಂಗೆ 122 ಸ್ಥಾನ
ಇದೇ ವೇಳೆ ಜಿಲ್ಲೆಯ ಎಂಟು ತಾಲೂಕು ಪಂಚಾಯಿತಿಗಳ 122 ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿಯೂ ಪ್ರಕಟವಾಗಿದೆ. ಒಟ್ಟು ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ 18, ಪರಿಶಿಷ್ಟ ಪಂಗಡಕ್ಕೆ 12, ಹಿಂದುಳಿದ ವರ್ಗ ‘ಅ’ಗೆ 23, ಹಿಂದುಳಿದ ವರ್ಗ ‘ಬ’ಗೆ 6 ಹಾಗೂ ಸಾಮಾನ್ಯ ವರ್ಗಕ್ಕೆ 63 ಸ್ಥಾನಗಳು ನಿಗದಿಯಾಗಿವೆ.
ತಾಲೂಕುವಾರು ನೋಡಿದರೆ ರಾಣೇಬೆನ್ನೂರು ತಾಪಂಗೆ ಗರಿಷ್ಠ 23 ಸ್ಥಾನಗಳು ನಿಗದಿಯಾಗಿವೆ. ಹಾವೇರಿ ಹಾಗೂ ಹಾನಗಲ್ ತಲಾ 20, ಶಿಗ್ಗಾಂವಿ 14, ಸವಣೂರು 13, ಬ್ಯಾಡಗಿ 12, ಹಿರೇಕೆರೂರು 11 ಹಾಗೂ ರಟ್ಟಿಹಳ್ಳಿ 9 ಸ್ಥಾನಗಳನ್ನು ಹೊಂದಿವೆ.
ತಾಪಂನ 122 ಸ್ಥಾನಗಳ ಪೈಕಿ 63 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ವರ್ಗವಾರು ಎಸ್ಸಿ ವಿಭಾಗದಲ್ಲಿ 11, ಎಸ್ಟಿಯಲ್ಲಿ 8, ಹಿಂದುಳಿದ ವರ್ಗ ‘ಅ’ದಲ್ಲಿ 12, ಹಿಂದುಳಿದ ವರ್ಗ ‘ಬ’ದಲ್ಲಿ 5 ಹಾಗೂ ಸಾಮಾನ್ಯ ವರ್ಗದಲ್ಲಿ 27 ಮಹಿಳಾ ಸ್ಥಾನಗಳಿವೆ.
ಮಹಿಳೆಯರಿಗೆ ಶೇ.50ಕ್ಕೂ ಹೆಚ್ಚು ಪ್ರಾತಿನಿಧ್ಯ..
ಜಿಪಂ ಹಾಗೂ ತಾಪಂ ಸೇರಿ ಜಿಲ್ಲೆಯಲ್ಲಿ ಒಟ್ಟು 156 ಸ್ಥಾನಗಳಿದ್ದು, ಅದರಲ್ಲಿ 80 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಅಂದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳು ಮಹಿಳೆಯರ ಪಾಲಾಗಿವೆ.
