ಮೊಬೈಲ್ ನಲ್ಲಿ ಪ್ರಶ್ನೆಪತ್ರಿಕೆ ಸ್ಕ್ಯಾನ್ ಮಾಡಿ ಉತ್ತರ ಬರೆದಿದ್ದ ವಿಎ ಟಾಪರ್ ಪೊಲೀಸ್ ವಶಕ್ಕೆ
79
ಜಿಲ್ಲೆಯ ಸುದ್ದಿ

ಮೊಬೈಲ್ ನಲ್ಲಿ ಪ್ರಶ್ನೆಪತ್ರಿಕೆ ಸ್ಕ್ಯಾನ್ ಮಾಡಿ ಉತ್ತರ ಬರೆದಿದ್ದ ವಿಎ ಟಾಪರ್ ಪೊಲೀಸ್ ವಶಕ್ಕೆ

23 ದಿನಗಳ ಹಿಂದೆ
textಹಾವೇರಿ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ವಿಎಒ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದ ಅಭ್ಯರ್ಥಿ ಶಂಕರ ಬನ್ನೂರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಳಸಿ ಪ್ರಶ್ನೆಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಉತ್ತರಗಳನ್ನು ಹುಡುಕಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಬಹಿರಂಗವಾಗಿದೆ. ಹಾನಗಲ್ಲ ಮೂಲದ ಶಂಕರ ಬನ್ನೂರು ಅಕ್ಟೋಬರ್ 4ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ 151.25 ಅಂಕಗಳನ್ನು ಗಳಿಸಿದ್ದ. ಆದರೆ, ಇದಕ್ಕೂ ಕೇವಲ 15 ದಿನಗಳ ಹಿಂದೆ ನಡೆದ ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ಆತ ಕೇವಲ 25 ಅಂಕಗಳನ್ನು ಪಡೆದಿದ್ದ. ಅಲ್ಪಾವಧಿಯಲ್ಲೇ ಅಂಕಗಳಲ್ಲಿ ಕಂಡುಬಂದ ಈ ಭಾರಿ ವ್ಯತ್ಯಾಸ ಪರೀಕ್ಷಾ ಅಕ್ರಮದ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಕೆಇಎ ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ತನಿಖೆಯ ವೇಳೆ ಶಿಗ್ಗಾಂವ ಪರೀಕ್ಷಾ ಕೇಂದ್ರದಲ್ಲಿ ಶಂಕರ ಬನ್ನೂರು ಮೊಬೈಲ್ ಬಳಸಿ ಪರೀಕ್ಷೆ ಬರೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕೊನೆಯ ಡೆಸ್ಕ್‌ನಲ್ಲಿ ಕುಳಿತಿದ್ದ ಅಭ್ಯರ್ಥಿ ಮೊಬೈಲ್ ಮೂಲಕ ಪ್ರಶ್ನೆಪತ್ರಿಕೆಯನ್ನು ಗೂಗಲ್ ಲೆನ್ಸ್ ಆ್ಯಪ್‌ನಲ್ಲಿ ಸ್ಕ್ಯಾನ್ ಮಾಡಿ ಉತ್ತರಗಳನ್ನು ಹುಡುಕುತ್ತಿರುವುದು ಕಂಡುಬಂದಿದೆ. ಬಳಿಕ ಆ ಉತ್ತರಗಳನ್ನು ಒಎಂಆರ್ ಪತ್ರಿಕೆಯಲ್ಲಿ ದಾಖಲಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿದುಬಂದಿದೆ. ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮಾತ್ರ ಪರಿಶೀಲಿಸಲಾಗಿತ್ತು. ಈ ವೇಳೆ ಮೊಬೈಲ್ ಸಮೇತ ಪರೀಕ್ಷಾ ಕೊಠಡಿ ಪ್ರವೇಶಿಸಿದ್ದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲ ಪೊಲೀಸರು ಶಂಕರ ಬನ್ನೂರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ತಡರಾತ್ರಿ ಶಿಗ್ಗಾಂವ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಪರೀಕ್ಷಾ ಕೇಂದ್ರದ ಭದ್ರತಾ ವ್ಯವಸ್ಥೆ, ಅಭ್ಯರ್ಥಿಗಳ ತಪಾಸಣೆ ಪ್ರಕ್ರಿಯೆ ಹಾಗೂ ಪರೀಕ್ಷಾ ಮೇಲ್ವಿಚಾರಕರ ಕರ್ತವ್ಯ ನಿರ್ವಹಣೆಯ ಬಗ್ಗೆಯೂ ತನಿಖೆ ಚುರುಕುಗೊಂಡಿದೆ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಹೇಗೆ ಪ್ರವೇಶಿಸಿತು ಎಂಬ ಪ್ರಶ್ನೆ ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.