ತಾಲ್ಲೂಕುವಾರು ಸುದ್ದಿಹಾವೇರಿ
ಸ್ವಚ್ಛತೆ ನಿತ್ಯ ಬದುಕಿನ ಭಾಗವಾಗಲಿ : ನ್ಯಾ.ಬಿರಾದಾರ ದೇವಿಂದ್ರಪ್ಪ
· News Haveri
ಹಾವೇರಿ : ದಿನನಿತ್ಯವೂ ನಾವು ಸ್ವಚ್ಛತೆಗೆ ಒತ್ತು ನೀಡಬೇಕು. ಇದರ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವಿಂದ್ರಪ್ಪಾ ಹೇಳಿದರು.
ಜಿಲ್ಲಾ ನ್ಯಾಯಾಲಯಗಳ ಸಂರ್ಕೀಣದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾಗಾಂಧೀಜಿ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛತೆ ಎಂಬುದು ಎಲ್ಲದಕ್ಕೂ ಸಂಬಂಧಿಸಿದ್ದಾಗಿದೆ. ಸ್ವಚ್ಛತೆ ಇದ್ದಲ್ಲಿ ನಮ್ಮ ಮನೆ, ಮನಸ್ಸು ಸಹ ಸ್ವಚ್ಛವಾಗಿರುತ್ತದೆ. ಪ್ರತಿಯೊಬ್ಬರೂ ಮೊದಲು ತಮ್ಮ ಮನೆ, ಕಚೇರಿ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ದೇಶವನ್ನು ಸ್ವಚ್ಛವಾಗಿಡಲು ಸಾಧ್ಯವಿದೆ. ಇದು ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಿಸಿದಂತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಅಶ್ವಿನಿ ವಿಜಯ ಶಿರಿಯಣ್ಣನವರ, ರಮೇಶ ಎನ್.ಎಂ., ಶೋಭಾ ಬಿ.ಜಿ., ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಶ್ರೀಶೈಲಜಾ ಎಚ್.ವಿ., ನ್ಯಾಯಾಧೀಶರಾದ ರಾಹುಲ್ ಆದಿನಾಥ್ ನ್ಯಾಮಗೌಡ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಸಿ. ಸಿದ್ದನಗೌಡ್ರ, ವಿ.ಜಿ. ದೊಡ್ಡಗೌಡರ, ಜಿಲ್ಲಾ ನ್ಯಾಯವಾದಿಗಳ ಸಂಘದ ಸದಸ್ಯರು, ಹಾಗೂ ನಗರಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು.
