Bus accident in Haveri: one dead, 11 injured in bus–truck collision
ಅಪರಾಧಹಾವೇರಿ

ರಾಜ್ಯ ಸಾರಿಗೆ ಸಂಸ್ಥೆಯ ಬಸ್–ಟ್ರಕ್ ಮುಖಾಮುಖಿ ಡಿಕ್ಕಿ: ಓರ್ವ ಸಾವು, 11 ಮಂದಿಗೆ ಗಾಯ

· Updated · News Haveri

ಹಾವೇರಿ ತಾಲ್ಲೂಕಿನ ಹಳೇರಿತ್ತಿ ಹಾಗೂ ಹೊಸರಿತ್ತಿ ಗ್ರಾಮಗಳ ನಡುವೆ ಹಾವೇರಿ–ನೆಗಳೂರು ಮಾರ್ಗದಲ್ಲಿ ಬುಧವಾರ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು 55 ವರ್ಷದ ಶಂಕರಯ್ಯ ಮಠದ್ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಬಸ್‌ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಗಂಭೀರವಾಗಿ ಗಾಯಗೊಂಡವರಲ್ಲಿ ನಿರ್ಮಲಾ ಹವಿನಾಳ, ಸುಜಾತಾ ಹವಿನಾಳ, ಗಾಯತ್ರಿ, ರುದ್ರಯ್ಯ, ರೇಖಾ, ಶಿವಲಿಂಗಪ್ಪ ಹಾಗೂ ಮುರುಗಯ್ಯ ಸೇರಿದ್ದಾರೆ. ಗಾಯಾಳುಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಗುತ್ತಲ ಮತ್ತು ಹೊಸರಿತ್ತಿಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ KMC ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹಾವೇರಿಯಿಂದ ನೆಗಳೂರಿನತ್ತ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗೆ ಎದುರಿನಿಂದ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಘಟನೆ ಕುರಿತು ಗುತ್ತಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.