ಸಿಡಿಲು ಬಡಿದು ಹಿರೇಮರಳಹಳ್ಳಿಯ ರೈತನ ಸಾವು
ಅಪರಾಧ

ಸಿಡಿಲು ಬಡಿದು ಹಿರೇಮರಳಹಳ್ಳಿಯ ರೈತನ ಸಾವು

· News Haveri

ಹಾವೇರಿ : ಜಿಲ್ಲೆಯಾದ್ಯಂತ ಅಲ್ಲಲ್ಲಿ ಸೋಮವಾರ ಧಾರಾಕಾರ ಮಳೆ ಸುರಿದಿದ್ದು, ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ರೈತನೋರ್ವ ಮೃತಪಟ್ಟ ಘಟನೆ -ನಡೆದಿದೆ. ಅಲ್ಲದೇ ಹಿರೇಮುಗದೂರ ಗ್ರಾಮದಲ್ಲಿ 7-8 ಮೇಕೆಗಳು ಸಿಡಿಲಿಗೆ ಬಲಿಯಾಗಿವೆ. ಮೃತ ರೈತನನ್ನು ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದ ದೊಡ್ಡಹನುಮಂತಪ್ಪ ನಿಂಗಪ್ಪ ರಿತ್ತಿ (60) ಎಂದು ಗುರುತಿಸಲಾಗಿದೆ. ಈತ ತನ್ನ ಜಮೀನಿನ ಕೆಲಸಕ್ಕೆ ತೆರಳಿದ್ದ ವೇಳೆ ಮಳೆ ಆರಂಭವಾಗಿದೆ. ಮಳೆಯಿಂದ ಆಶ್ರಯ ಪಡೆಯಲೆಂದು ಮರದ ಕೆಳಗೆ ನಿಂತಿದ್ದು, ಸಿಡಿಲು ಮರಕ್ಕೆ ಬಡಿದ ಪರಿಣಾಮ ರೈತ ದೊಡ್ಡಹನುಮಂತಪ್ಪ ರಿತ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೇ ರೀತಿ ಸವಣೂರ ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದ ಪಕ್ಕದ ಗ್ರಾಮವಾದ ಹಿರೇಮುಗದೂರಲ್ಲೂ ಸಿಡಿಲು ಬಡಿದು 7-8 ಮೇಕೆಗಳು ಸಾವನ್ನಪ್ಪಿವೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕ ಹೊನ್ನೂರ ಗ್ರಾಮದ ಲಕ್ಷ್ಮಣ ಕಟ್ಟೇಕಾರ ಸಂಚಾರಿ ಕುರಿಗಾಹಿಯಾಗಿದ್ದು, ಈತ ಹಿರೇಮುಗದೂರ ಗ್ರಾಮದ ಕನವಳ್ಳಿ ಎಂಬುವರ ಜಮೀನಿನಲ್ಲಿ ಮೇಯಲು ಮೇಕೆಗಳನ್ನು ಬಿಟ್ಟಿದ್ದರು. ಮಧ್ಯಾಹ್ನದ ಹೊತ್ತಿಗೆ ಇದ್ದಕ್ಕಿದ್ದಂತೆ ಮಳೆ ಆರಂಭವಾಗಿ, ಮೇಕೆಗಳು ಗಿಡವನ್ನು ಆಶ್ರಯಿಸಲೆಂದು ತೆರಳಿವೆ. ಅದೇ ವೇಳೆಗೆ ಮರಕ್ಕೆ ಸಿಡಿಲು ಬಿದ್ದ ಪರಿಣಾಮ 7-8 ಮೇಕೆಗಳು ಸಾವನ್ನಪ್ಪಿದ್ದು, ಸುಮಾರು 70-80 ಸಾವಿರ ರೂ., ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಸವಣೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.