ವಿಶೇಷ ಅಂಕಣಗಳು
ಹಾವೇರಿಯಲ್ಲೂ ಎಐ ಬಳಕೆ ಸುಲಭ
· News Haveri
ಹಾವೇರಿ : ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೃಷಿ, ಶಿಕ್ಷಣ, ಮುದ್ರಣ, ಡಿಸೈನಿಂಗ್, ಸಣ್ಣ ವ್ಯಾಪಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸದ್ದಿಲ್ಲದೇ ಇದರ ಬಳಕೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುತ್ತಿದೆ.
ಹಾವೇರಿಯಂತಹ ಎರಡನೇ ದರ್ಜೆಯ ಜಿಲ್ಲಾ ಕೇಂದ್ರಗಳಲ್ಲಿ ದೊಡ್ಡ ತಂತ್ರಜ್ಞಾನ ಸಂಸ್ಥೆಗಳು, ಕೈಗಾರಿಕೆ ಅಥವಾ ಹೆಚ್ಚಿನ ಸಂಪನ್ಮೂಲಗಳು ಇಲ್ಲದಿದ್ದರೂ, AIಯನ್ನು ಸ್ವಯಂ ಉದ್ಯೋಗ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಧನವಾಗಿ ಬಳಸಬಹುದು.
ಕನ್ನಡದಲ್ಲಿಯೇ ಧ್ವನಿಯ ಮೂಲಕ ಮಾಹಿತಿ ನೀಡಿ, ಪರಿಹಾರ ಪಡೆಯಬಹುದು. ಉದಾಹರಣೆಗೆ ಕೃಷಿ ಸಂಬಂಧಿತ ಪ್ರಶ್ನೆಗಳಿಗೆ, ಬೆಳೆಗಳ ಕುರಿತು ಮಾಹಿತಿ, ಉತ್ಪನ್ನಗಳ ಪ್ರಚಾರಕ್ಕಾಗಿ ಬರಹ ಮತ್ತು ಚಿತ್ರಗಳನ್ನು ಸಿದ್ಧಪಡಿಸಲು ಸೇರಿದಂತೆ ಹಲವು ಕೆಲಸಗಳನ್ನು ಮೊಬೈಲ್ ಮೂಲಕವೇ ಮಾಡಬಹುದು. ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಯುವಕರು ತಮ್ಮ ಸ್ಥಳೀಯ ಜ್ಞಾನವನ್ನು AIಯೊಂದಿಗೆ ಸಂಯೋಜಿಸಿ ಹೊಸ ಸೇವೆಗಳನ್ನು ನೀಡಬಹುದು.
ಅಪಾಯಗಳೂ ಉಂಟು, ಎಚ್ಚರ
AIಯ ಬಳಕೆಗೆ ಕೆಲವು ಅಪಾಯಗಳೂ ಇವೆ. ಅದು ನೀಡುವ ಮಾಹಿತಿ ಎಲ್ಲವೂ ಸರಿಯಾಗಿರುತ್ತದೆ ಎಂದು ನಂಬುವಂತಿಲ್ಲ. ವಿಶೇಷವಾಗಿ ಕೃಷಿ, ಆರೋಗ್ಯ ಮತ್ತು ಹಣಕಾಸು ವಿಷಯಗಳಲ್ಲಿ AI ಸಲಹೆ ಅಂತಿಮವಲ್ಲ. ವೈಯಕ್ತಿಕ ಮಾಹಿತಿಯ ಗೌಪ್ಯತೆ, ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಸರಿಯಲ್ಲ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸಮಸ್ಯೆಗಳು, ಅದರ ಪರಿಹಾರಗಳು ಡಿಜಿಟಲ್ ಕ್ಷೇತ್ರದಿಂದ ವಿಭಿನ್ನವಾಗಿವೆ. ಇದರ ಅರಿವು ಹೊಂದಿರುವುದು ಅತ್ಯಗತ್ಯ.
ಆದ್ದರಿಂದ AIಯನ್ನು ಮನುಷ್ಯನ ಪರ್ಯಾಯವಾಗಿ ನೋಡುವುದಕ್ಕಿಂತ ಮನುಷ್ಯನ ಜ್ಞಾನ ಮತ್ತು ಅನುಭವಕ್ಕೆ ಸಹಾಯಕವಾದ ಸಾಧನವಾಗಿ ಬಳಸುವುದು ಸೂಕ್ತ.
ಹಾವೇರಿಯಂತಹ ಎರಡನೇ ದರ್ಜೆಯ ಜಿಲ್ಲಾ ಕೇಂದ್ರಗಳಲ್ಲಿ ಕಡಿಮೆ ಸಂಪನ್ಮೂಲದಲ್ಲಿ AI ನೆರವಿನಿಂದ ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದರತ್ತ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಕಂಪ್ಯೂಟರ್ ತಜ್ಞರು ಜನಸಾಮಾನ್ಯರಿಗೆ ಈ ನಿಟ್ಟಿನಲ್ಲಿ ಶೈಕ್ಷಣಿಕ ಜಾಗೃತಿ ನೀಡುವತ್ತ ಚಿಂತನೆ ನಡೆಸಬಹುದು.
