ಜಿಲ್ಲೆಯ ಸುದ್ದಿ
ಹಾವೇರಿ ಐಬಿಯಲ್ಲಿ ಅಪರೂಪದ ಚಿಪ್ಪು ಹಂದಿ ಪ್ರತ್ಯಕ್ಷ
· News Haveri
ಹಾವೇರಿ : ನಗರದ ಹೃದಯಭಾಗವೇ ಆಗಿರುವ ಪ್ರವಾಸಿ ಮಂದಿರದಲ್ಲಿ ಸೋಮವಾರ ಅಪರೂಪದ ಚಿಪ್ಪು ಹಂದಿ ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಐಬಿ ಸಿಬ್ಬಂದಿ ಚಂದ್ರಪ್ಪ ಅವರ ಮನೆಯ ಶೌಚಾಲಯದಲ್ಲಿ ಈ ಚಿಪ್ಪು ಹಂದಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಮನೆಯವರೆಲ್ಲ ವಿಚಿತ್ರ ಪ್ರಾಣಿ ಕಂಡು ಭಯಗೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಪ್ಪು ಹಂದಿ ವಿಶೇಷತೆ ಏನು ?
ಚಿಪ್ಪು ಹಂದಿ ಸಾಮಾನ್ಯವಾಗಿ ರಾತ್ರಿ ವೇಳೆ ಸಂಚರಿಸುವ ನಿಶಾಚರಿ ಪ್ರಾಣಿ. ಇರುವೆ, ಗೆದ್ದಲು ಮುಂತಾದ ಕೀಟಗಳನ್ನು ತಿಂದು ಬದುಕುವ ನಿರುಪದ್ರವಿ. ತನಗೆ ಅಪಾಯ ಎದುರಾದಾಗ ಮಾತ್ರ ತನ್ನ ದೇಹವನ್ನೇ ಚೆಂಡಿನತೆ ಮಾಡಿಕೊಂಡು ರಕ್ಷಿಸಿಕೊಳ್ಳುತ್ತದೆ. ಇನ್ನು ಇದರ ಮೈಮೇಲೆ ಇರುವ ಚಿಪ್ಪಿಗಳು ಅತ್ಯಂತ ಗಟ್ಟಿ ಇದ್ದು ಸಾಧಾರಣ ದಾಳಿಗೆ ಒಡೆಯಲಾರವು. ಇದೇ ವಿಶೇಷತೆಯಿಂದಾಗಿ ಇದು ತನ್ನ ಪ್ರಾಣ ರಕ್ಷಣೆ ಮಾಡಿಕೊಳ್ಳುವ ವಿಶೇಷ ಗುಣ ಹೊಂದಿದೆ.
ಇದು ಇತರರಿಗೆ ತೊಂದರೆ ಕೊಡದಿರುವ ಗುಣದಿಂದಲೇ ಅಕ್ರಮ ಬೇಟೆ ಮತ್ತು ಕಳ್ಳ ಸಾಗಣೆಗೆ ಸಿಲುಕುತ್ತಿದೆ. ಇಂಥ ಅಪರೂಪದ ವನ್ಯಜೀವಿ ಇಂದು ಅಪಾಯದಲ್ಲಿದೆ.
ಹಾವೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಕಾರಿ ಕು.ಅನುಷಾ ಎಂ., ಹಾವೇರಿ ವಲಯ ಅರಣ್ಯಾಕಾರಿ ಸಿದ್ದಮ್ಮ ಕರಿಗಾರ, ಶಹರ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಹಂಡೆರ ಹಾಗೂ ಗುತ್ತಲ ಗಸ್ತು ಅರಣ್ಯ ಪಾಲಕ ಬಸವರಾಜ ಕುಲಕರ್ಣಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ಡರು.
ಸಾರ್ವಜನಿಕರು ಇಂಥ ಪ್ರಾಣಿಗಳು ಕಂಡುಬಂದಲ್ಲಿ ಅವುಗಳಿಂದ ದೂರವಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಉಪ ಅರಣ್ಯ ಸಂರಕ್ಷಣಾಕಾರಿ ಅಕ್ಷಯ್ ಪ್ರಕಾಶಕರ ತಿಳಿಸಿದ್ದಾರೆ.
