ಜಿಲ್ಲೆಯ ಸುದ್ದಿ
ಅ.12ರಿಂದ ರಾಜ್ಯಾದ್ಯಂತ ಗ್ರಾಪಂ ನೌಕರರ ಹೋರಾಟ
· News Haveri
ಹಾವೇರಿ : ಕಾರ್ಮಿಕ ಇಲಾಖೆಯು ಮೇ 22 ರಂದು ಹೊರಡಿಸಿದ ನೊಟಿಫಿಕೇಷನ್ ನಂತೆ ಗ್ರಾಪಂ ಸಿಬ್ಬಂದಿಗೆ ಕನಿಷ್ಠ ವೇತನ ಹೆಚ್ಚಳ ಮುಂದುವರಿಕೆ ಹಾಗೂ ಸೇವಾ ಹಿರಿತನ ಆಧರಿಸಿ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಪಂ ನೌಕರರು ಬುಧವಾರ ತಾಲೂಕ ಪಂಚಾಯಿತಿ ಆಡಳಿತಾಧಿಕಾರಿ ಡಾ.ಪರಮೇಶ ಹುಬ್ಬಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ರಾಜ್ಯಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸಿದ್ದು ಗ್ರಾಪಂ ನೌಕರರು ಅಕ್ಟೋಬರ್ 12 ರಂದು ರಾಜ್ಯಾದ್ಯಂತ ಧರಣಿ ನಡೆಸಲಿದ್ದಾರೆ. ಕಾರ್ಮಿಕ ಇಲಾಖೆಯು ಮೇ 22 ರಂದು ಹೊರಡಿಸಿದ ನೊಟಿಫಿಕೇಷನ್ ನಂತೆ ಗ್ರಾಪಂ ಸಿಬ್ಬಂದಿಗೆ ಕನಿಷ್ಠ ವೇತನ ಹೆಚ್ಚಳ ಮುಂದುವರಿಕೆ ಹಾಗೂ ಸೇವಾ ಹಿರಿತನ ಆಧರಿಸಿ ವೇತನ ಜಾರಿಗೆಯ ಪ್ರಮುಖ ಬೇಡಿಕೆಗಳ ಜತೆಗೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 12 ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ಪಾದಯಾತ್ರೆ ಆರಂಭಿಸಿ ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಅನಿರ್ಧಿಷ್ಟಾವಧಿ ಹೋರಾಟ ನಡೆಸಲಾಗುವುದು. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ಮನವಿ ಸಲ್ಲಿಕೆಯ ವೇಳೆ ಸಂಘದ ಮುಖಂಡರಾದ ಶಿವಕುಮಾರ ಕೋಟಿಬಾಗರ, ಸತೀಶ ಬ್ಯಾಡಗಿ, ದಾನಪ್ಪ ದಿಡ್ಡಿ, ಕರಿಯಪ್ಪ ಕನ್ನಪ್ಪನವರ, ಮಲ್ಲೇಶ ಲಮಾಣಿ ವಿವಿಧ ಗ್ರಾಪಂ ನೌಕರರು ಇದ್ದರು.
