ರಾಜಕೀಯ
ರಾಜ್ಯ ಸರ್ಕಾರಕ್ಕೆ ಪ್ರಕರಣ ದಾಖಲಿಸುವ ಅಧಿಕಾರವಿಲ್ಲ: ಬೊಮ್ಮಾಯಿ
· News Haveri
ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದವರು ನಕಲಿ ಮತಗಳು, ಒಂದೇ ವ್ಯಕ್ತಿಯಿಂದ ಎರಡು ಕಡೆ ಹಾಗೂ ಸತ್ತವರ ಹೆಸರಿನಲ್ಲಿ ಮತಗಳನ್ನು ಹಾಕಿಸಿಕೊಂಡು ಆಯ್ಕೆಯಾಗುತ್ತಿದ್ದರು. ಈಗ ಎಸ್ಐಆರ್ ನಿಂದ ಅವರಿಗೆ ತೊಂದರೆಯಾಗಿದೆ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂತಹ ಫೇಕ್ ಮತಗಳ ರಕ್ಷಣೆಗಾಗಿ ಚುನಾವಣಾಧಿಕಾರಿ ಕಚೇರಿ ಎದುರು ಧರಣಿಯ ನಾಟಕ ಆಡಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ದೂರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭದಿಂದಲೂ ಬಹಳ ಸರಳವಾಗಿ ನಡೆದುಕೊಂಡು ಬರುತ್ತಿತ್ತು. ಆರಂಭದಲ್ಲಿ ಕಾಂಗ್ರೆಸ್ ನವರು ಹಲವೆಡೆ ಮಸೀದಿಯಲ್ಲಿ ಅರ್ಜಿ ತುಂಬಿಸುವುದಕ್ಕೆ ವಿರೋಧಿಸಿದ್ದೇವು. ನಂತರ ಇದು ಸರಳವಾಗಿ ಮುಗಿಯಬೇಕಿತ್ತು, ಅಕ್ಟೋಬರ್ 8 ರಂದು ಕರಡು ಮತಪಟ್ಟಿಯನ್ನು ಕೊಡಬೇಕಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ನವರು ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ನಮ್ಮ ಪಕ್ಷದ ಮುಖಂಡರು ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಈಗ ಕಾನೂನಾತ್ಮಕವಾಗಿ ಎಲ್ಲವೂ ಹೊರಬರುತ್ತಿವೆ. ರಾಜ್ಯ ಸರ್ಕಾರಕ್ಕೆ ನೇರವಾಗಿ ಇದರ ವಿರುದ್ಧ ದೂರು ದಾಖಲಿಸುವ ಯಾವುದೇ ಅಧಿಕಾರವಿಲ್ಲ. ಇದನ್ನು ಸಂಪೂರ್ಣವಾಗಿ ಚುನಾವಣಾ ಅಧಿಕಾರಿಗಳೇ ಮಾಡಬೇಕು. ಕಾನೂನಿನ ಪ್ರಕಾರ ಅರ್ಹರ ಮತಗಳು ಮಾತ್ರ ರಕ್ಷಿಸಲ್ಪಡಬೇಕು ಮತ್ತು ಅನರ್ಹರ ಮತಗಳನ್ನು ತೆಗೆದುಹಾಕಬೇಕು ಎನ್ನುವುದು ನಮ್ಮ ಸ್ಪಷ್ಟ ನಿಲುವು ಎಂದರು.
ಡಿಲಿಮಿಟೇಷನ್ ಆಗಬೇಕು : ಸವಣೂರು ತಾಲೂಕು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಆಗಬೇಕೆನ್ನುವ ಬೇಡಿಕೆ ಕುರಿತು ಪ್ರತಿಕ್ರಿಯಿಸಿ, ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಡಿಲಿಮಿಟೇಶನ್ (ಗಡಿ ನಿರ್ಣಯ) ಪ್ರಕ್ರಿಯೆ ನಡೆಯಬೇಕು. ಬಳಿಕ ಕೇಂದ್ರ ಮತ್ತು ರಾಜ್ಯ ಸಮಿತಿಗಳ ರಚನೆಯಾಗಿ, ಒಂದು ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಜನಸಂಖ್ಯೆ ಇರಬೇಕು ಎಂದು ನಿರ್ಧಾರ ಆಗುತ್ತೆ, ಆಗ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಮನವಿಯನ್ನು ಪರಿಗಣಿಸಲಾಗುತ್ತದೆ ಎಂದರು.
ಆತ್ಮಾವಲೋಕನ ಮಾಡಿಕೊಳ್ಳಲಿ : ಎಸ್ಐಆರ್ ಪ್ರಕ್ರಿಯೆ ಆರಂಭದ ನಂತರ ನಡೆದ ಎಲ್ಲ ಚುನಾವಣೆಗಳನ್ನು ರದ್ದು ಪಡಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರು ಎಲ್ಲ ಕಡೆ ಸೋತಿದ್ದಾರೆ. ಅದಕ್ಕಾಗಿ ಕುಂಟು ನೆಪ ಹೇಳುತ್ತಿದ್ದಾರೆ. ಅವರ ಪಕ್ಷ ಯಾಕೆ ಸೋತಿದೆ ಅನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಚಾಟಿ ಬೀಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಮಾನತು ಮಾಡಬೇಕೆಂಬ ಬೇಡಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷದವರಿಗೆ ದೇಶದ ಅಭಿವೃದ್ಧಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರು ದೇಶದಲ್ಲಿ ಹೇಗಾದರೂ ಮಾಡಿ ದಂಗೆ ಎಬ್ಬಿಸಬೇಕೆಂದು ಬಯಸುತ್ತಿದ್ದಾರೆ. ಅದಕ್ಕೆ ದೇಶದ ಜನರು ಸೊಪ್ಪು ಹಾಕುವುದಿಲ್ಲ ಎಂದರು.
