ಜಿಲ್ಲೆಯ ಸುದ್ದಿ
ಭಾರತ ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿದೆ : ಪ್ರೊ.ಮಾ.ನಾಗರಾಜ
· News Haveri
ಹಾವೇರಿ : ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಅವರ ಪರಿಶ್ರಮದ ಫಲವಾಗಿ ಭಾರತ ಇಂದು ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಕೇರಳಮ್ ರಾಜ್ಯದ ಪ್ರಭಾರಿ ಪ್ರೊ.ಎಂ. ನಾಗರಾಜ ಹೇಳಿದರು.
ನಗರದ ಬಿ.ಎಂ. ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ, ಸೇವಾ ಸಂಕಲ್ಪ ಅಭಿಯಾನ ಹಾಗೂ ಮೇರಾ ಸಪನೋಂ ಕಾ ಭಾರತ್ ಅಭಿಯಾನದ ಅಂಗವಾಗಿ ಶಾಲಾ ಸಭಾಂಗಣದಲ್ಲಿ ಶನಿವಾರ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಭದ್ರತೆಯ ವಿಚಾರದಲ್ಲಿ ಭಾರತ ಬಲಶಾಲಿಯಾಗಿದೆ. ಭಾರತದ ಶಕ್ತಿ ಈಗ ಜಗತ್ತಿಗೆ ತಿಳಿದಿದೆ. ಜಗತ್ತಿನ ಹಲವು ಮುಂದುವರಿದ ರಾಷ್ಟ್ರಗಳಲ್ಲಿ ಸಾಮರ್ಥ್ಯದ ತುರ್ತುಪರಿಸ್ಥಿತಿ ಕಾಣಿಸುತ್ತಿದೆ. ಆದರೆ, ಭಾರತದಲ್ಲಿ ಅಂಥ ಸ್ಥಿತಿ ಇಲ್ಲ. ದೇಶದ ಭವಿಷ್ಯದ ದೃಷ್ಠಿಯಿಂದ ಅಗತ್ಯವಾದ ವಿದ್ಯುತ್ ಶಕ್ತಿಯನ್ನು ಸಂಗ್ರಹ ಮಾಡಲಾಗಿದೆ. ಸೋಲಾರ ಶಕ್ತಿ ಉತ್ಪಾದನೆಗೆ ನಮ್ಮಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ನಮ್ಮ ದೇಶ ಸುಮಾರು 75 ಸಾವಿರ ಕಿಲೋ ಮೀಟರ್ ಉದ್ದದ ರೈಲು ಹಳಿಯ ಸಂಪರ್ಕ ವ್ಯವಸ್ಥೆ ಹೊಂದಿದೆ. ಇದರ ಶೇ.100ರಷ್ಟು ವಿದ್ಯುದೀಕರಣ ಪೂರ್ಣಗೊಂಡಿದೆ. ಸೋಲಾರ್ ವಿದ್ಯುತ್‌ನಿಂದಲೂ ರೈಲುಗಳನ್ನು ಓಡಿಸಲಾಗುತ್ತಿದೆ. ನರೇಂದ್ರ ಮೋದಿ ಜೀ ಅವರ ದೂರದೃಷ್ಟಿಯ ಚಿಂತನೆಗಳು, ದೇಶದ ಸ್ವಾವಲಂಭನೆಯ ಕಲ್ಪನೆಗಳು ಮತ್ತು ಅವುಗಳನ್ನು ಸಾಕಾರಗೊಳಿಸುತ್ತಿರುವ ಕಾರಣದಿಂದಾಗಿ ಇಂತಹ ನೂರಾರು ಸಾಧನೆಯನ್ನು ಮಾಡಲು ಸಾಧ್ಯವಾಗಿದೆ ಎಂದು ಮಕ್ಕಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಬಿಎಂಐಪಿಎಸ್ ಶಾಲೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೀಲಪ್ಪ ಚಾವಡಿ, ಮುಖಂಡರಾದ ನಿಂಗಪ್ಪ ಬಟ್ಟಲಗಟ್ಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಪ್ರಾಚಾರ್ಯ ಸಂತೋಷ ಕೃಷ್ಣಾಪುರ, ಚಂದನ್ ನಾಗರಾಜ, ಸಿದ್ದು ಚಿಕ್ಕಬಿದರಿ, ಶಾಲೆಯ ನೂರಾರು ಪುಟಾಣಿ ಮಕ್ಕಳು, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
