gangamata-samaja
ಜಿಲ್ಲೆಯ ಸುದ್ದಿ

ಒಗ್ಗಟ್ಟಾಗಿದ್ದರೆ ಗಂಗಾಮತ ಸಮಾಜಕ್ಕೆ ಒಳ್ಳೆಯ ಭವಿಷ್ಯತ್ತಿದೆ: ಬಸವರಾಜ ಬೊಮ್ಮಾಯಿ

· News Haveri

ಒಗ್ಗಟ್ಟಾಗಿದ್ದರೆ ಗಂಗಾಮತ ಸಮಾಜಕ್ಕೆ ಒಳ್ಳೆಯ ಭವಿಷ್ಯತ್ತಿದೆ: ಬಸವರಾಜ ಬೊಮ್ಮಾಯಿ ಹಾವೇರಿ : ಗಂಗಾಮತ ಸಮಾಜ ದೇಶಾದ್ಯಂತ ಇದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಲ್ಲಿ ಗುರುತಿಸಿಕೊಂಡಿದೆ. ಆದರೆ ಸಮಾಜಕ್ಕೆ ಶಕ್ತಿ ತುಂಬಬೇಕೆಂದರೆ ಎಲ್ಲರೂ ಅಂಬಿಗರ ಚೌಡಯ್ಯನವರ ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಮುನ್ನಡೆದು, ಒಗ್ಗಟ್ಟಾಗಿದ್ದರೆ ಗಂಗಾಮತ ಸಮಾಜಕ್ಕೆ ಒಳ್ಳೆಯ ಭವಿಷ್ಯತ್ತಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದರು. ಹಾವೇರಿ ಶಹರದ ವಿನಾಯಕ ನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಹಾವೇರಿ ತಾಲೂಕ ಗಂಗಾಮತ ಸಮಾಜದ ನೌಕರರ ಸಂಘದ ವತಿಯಿಂದ ಏರ್ಪಡಿಸಿದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಅಂಬಿಗರ ಚೌಡಯ್ಯ ಬಸವಾದಿ ಶರಣರಲ್ಲೇ ಪ್ರಮುಖರು, ಜೀವನದ ಕಟು ಸತ್ಯಗಳನ್ನು ನಿಷ್ಠುರವಾಗಿ ವಚನಗಳ ರೂಪದಲ್ಲಿ ಹೇಳಿದ ಮಹಾನ್ ವಚನಕಾರ. ಅಂಬಿಗರ ಸಮಾಜ ದೇಶದ ಉದ್ದಗಲಕ್ಕೂ ಹರಡಿದೆ. ಈ ಸಮಾಜ ಪ್ರತಿ ರಾಜ್ಯದಲ್ಲಿ ಒಂದೊಂದು ಹೆಸರಿನಲ್ಲಿ ಅಂಬಿಗರು, ಗಂಗಾಮತಸ್ತರು, ಉಪ್ಪಾಳರು ಎಂದು 37 ಹೆಸರುಗಳಿಂದ ಗುರುತಿಸಿಕೊಂಡಿದೆ. ಈ ಸಮಾಜಕ್ಕೆ ಶಕ್ತಿ ತುಂಬಬೇಕಾದರೆ ಈ ಸಮಾಜದ ಎಲ್ಲರೂ ಒಂದಾಗಿ ಒಂದೇ ಧ್ವನಿಯಲ್ಲಿ ಅಂಬಿಗರ ಚೌಡಯ್ಯನವರ ಪೀಠದ ಶ್ರೀಗಳ ನೇತೃತ್ವದಲ್ಲಿ ಮುನ್ನಡೆಯಬೇಕು. ಈ ಸಮಾಜಕ್ಕೆ ಮೀಸಲಾತಿ ಕೊಡಿಸುವ ವಿಚಾರದಲ್ಲಿ ನಾನೂ ನಿಮ್ಮ ಜೊತೆಗಿರುತ್ತೇನೆ ಎಂದು ವಾಗ್ದಾನ ನೀಡಿದರು. ವೃತ್ತಿ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಒಂದೇ ಇದೆ. ಈಗಾಗಲೇ ಕೆಲವು ನಾಮಾಂಕಿತ ಜಾತಿಗಳಿಗೆ ಮೀಸಲಾತಿ ಸಿಕ್ಕಿದೆ. ಉಳಿದವರು ಹಿಂದುಳಿದ ವರ್ಗದಲ್ಲಿ ಇದ್ದೀರಿ. ಕರ್ನಾಟಕ ರಾಜ್ಯ ಸರ್ಕಾರ ಕುಲಶಾಸ್ತ್ರ ಅಧ್ಯಯನ ನಡೆಸಿದ್ದು, ವರದಿ ಬಂದ ನಂತರ ಮತ್ತೆ ಮೀಸಲಾತಿ ಪಕ್ರಿಯೆ ನಡೆಯಲಿದೆ. ಆಗ ನಾನು ನಿಮ್ಮ ಜೊತೆ ನಿಲ್ಲುತ್ತೇನೆ ಎಂದರು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಟ್ಟಲು ಅಗತ್ಯವಾದ ಅನುದಾನ ನೀಡುತ್ತೇನೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1 ಕೋಟಿ, ನಮ್ಮ ಅಧಿಕಾರದಲ್ಲಿ 5 ಕೋಟಿ ಹಾಗೂ ಸ್ಥಳೀಯ ಶಾಸಕರ ಅನುದಾನದಲ್ಲಿ 3 ಕೋಟಿ ಹೀಗೆ ಒಟ್ಟು 8 ಕೋಟಿ ರೂ. ಅನುದಾನ ಕೊಟ್ಟಿದ್ದೇವೆ. ಉಳಿದ ಕೆಲಸವನ್ನು ಪೂರ್ಣ ಮಾಡಿದಲ್ಲಿ ರಾಜ್ಯಾದ್ಯಂತ ಜನರು ಇಲ್ಲಿಗೆ ಬಂದು ಸೇರುತ್ತಾರೆ. ಅವರಿಗೆ ಅನುಕೂಲ ಆಗವಂತೆ ಅಭಿವೃದ್ಧಿ ಆಗಲಿ ಎಂದು ಹಾರೈಸಿದರು. ಅಂಬಿಗರ ಚೌಡಯ್ಯನವರ ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಕಳೆದ ಐದು ವರ್ಷದಲ್ಲಿ ಈ ಸಮಾಜವನ್ನು ಎದ್ದು ನಿಲ್ಲುವಂತೆ ಕಟ್ಟುವ ಕೆಲಸ ಮಾಡಿದ್ದಾರೆ. ಕೆಲವು ಕಡೆ ಈ ಸಮಾಜ ಇನ್ನೂ ಬಹಳ ದುಃಸ್ಥಿತಿಯಲ್ಲಿದೆ. ಕಲಬುರ್ಗಿ ಭಾಗದಲ್ಲಿ ವಿಠ್ಠಲ ಹೆರೂರ ಅವರು ಬಹಳ ಹೋರಾಟ ಮಾಡಿ, ಯಾರೂ ಇಲ್ಲದಿದ್ದಾಗಲೂ ರಾಜ್ಯ ಸುತ್ತಿ ಸಮಾಜ ಕಟ್ಟಿದ್ದಾರೆ. ಎಂಎಲ್ಸಿ ಇದ್ದಾಗಲೂ ಈ ಸಮಾಜದ ಪರವಾಗಿ ಧ್ವನಿ ಎತ್ತಿದ್ದಾರೆ. ಅವರ ಹೋರಾಟಕ್ಕೆ ಸಾರ್ಥಕತೆ ಬರಲು ಎಲ್ಲರೂ ಒಟ್ಟಾಗಿ ಗುರುಗಳ ಜೊತೆಗೆ ನಿಲ್ಲಿ,ಆಗ ಸರ್ಕಾರಗಳು ನಿಮ್ಮ ಮಾತು ಕೇಳುತ್ತವೆ ಎಂದು ಸಲಹೆ ಮಾಡಿದರು. ಅಂಬಿಗರ ಚೌಡಯ್ಜಯಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಚಿವ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ, ಕೆ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಗಂಗಾಮತ ಸಮಾಜ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಂ. ದಂಡಿನ, ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ, ತಾಲೂಕಾಧ್ಯಕ್ಷ ಬಸವರಾಜ ಕಳಸೂರ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.